ಬಾಂಟೂ ಭಾಷೆಗಳು- 
ಆಫ್ರಿಕನ್ ಭಾಷಾ ಪರಿವಾರದ ನೈಜರ್‍ಕಾಂಗೋ ಭಾಷಾ ಶಾಖೆಗೆ ಸೇರಿದ ಬೆನುಎ-ಕಾಂಗೋ ಎಂಬ ಉಪಶಾಖೆಯ ಬಾಂಟಾಯಿಡ್ ಎಂಬ ಗುಂಪಿಗೆ ಈ ಬಾಂಟೂ ಭಾಷೆಗಳು ಸೇರಿವೆ. 1856ರಲ್ಲಿ ವಿಲ್‍ಹೆಲ್ಮ್ ಬ್ಲೇಕ್ ಎಂಬುವವರು ಈ ಭಾಷೆಗಳಿಗೆ ಬಾಂಟೂ ಎಂದು ಹೆಸರಿಟ್ಟರು. ಬಾಂಟೂ ಭಾಷೆಗಳಿಗೂ ಪಶ್ಚಿಮ ಆಫ್ರಿಕದ ಭಾಷೆಗಳಿಗೂ ಸಂಬಂಧವಿದೆ ಎನ್ನುವುದನ್ನು ಮೊತ್ತಮೊದಲಿಗೆ ತೋರಿಸಿ ಕೊಟ್ಟವರು ವೆಸ್ಟರ್‍ಮನ್. ಇವನ್ನು ನೈಜರ್-ಕಾಂಗೋ ಎಂಬ ಭಾಷಾ ಶಾಖೆಯಲ್ಲಿ ಸೇರಿಸಿದವರು ಜೋಸೆಫ್ ಗ್ರೀನ್‍ಬಗ್‍ಘ. ಬಾಂಟೂ ಭಾಷೆಗಳು ಪಶ್ಚಿಮದಲ್ಲಿ ಕಾಮರೂನ್ ಮತ್ತು ನೈಜೀರಿಯದವರೆಗೆ ವ್ಯಾಪಿಸಿವೆ. ಪೆಂಬ, ಜಾಂಜಿಬಾರ್, ಮಫಿಯ, ಇಬೋ, ಕೊಮೊರೊ, ಫರ್ನಾಂಡೋ, ಪೋ ಮತ್ತು ಮಡಗಾಸ್ಕರ್ ಮುಂತಾದ ಕಡೆಗಳಲ್ಲಿ ಈ ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಸುಮಾರು ಆರು ಕೋಟಿ.

ಈ ಭಾಷೆಗಳು ತಾನಪ್ರಧಾನವಾದವು. ಇಲ್ಲಿಯ ಪದಗಳಲ್ಲಿ ಸ್ವರಾಘಾತಗಳ ಬಳಕೆ ಹೆಚ್ಚು. ತೀವ, ಬೆತರೆ, ಬತು, ನ್ದೋರೋ, ಮಾಂಬೆಲ, ಬುತೆ, ಬಾಂಟು ಮುಂತಾದವು ಬಾಂಟಾಯಿಡ್ ಗುಂಪಿನ ಮುಖ್ಯ ಭಾಷೆಗಳು. ಸ್ವಹೀಲೇ ಪ್ರಮುಖ ವ್ಯಾವಹಾರಿಕ ಭಾಷೆ. ಇದು ಪೂರ್ವ ಆಫ್ರಿಕದಲ್ಲಿ ಹೆಚ್ಚು ಬಳಕೆಯಲ್ಲಿದೆ. ಸ್ವಹೀಲೇ ಭಾಷೆಯಲ್ಲಿ ಬಾಂಟೂ ಸಾಹಿತ್ಯ ಹೆಚ್ಚಾಗಿ ಕಂಡು ಬರುತ್ತದೆ.

ನಾಮಪದಗಳಿಗೆ ಏಕವಚನ ಮತ್ತು ಬಹುವಚನ ಸೂಚಕವಾಗಿ ಪೂರ್ವ ಪ್ರತ್ಯಯಗಳು ಕಂಡುಬರುವುದು ಬಾಂಟೂ ಭಾಷೆಗಳ ಮುಖ್ಯ¯ಕ್ಷಣ. ಗಂದ ಭಾಷೆಯಲ್ಲಿ ಏಕವಚನ ಪೂರ್ವಪ್ರತ್ಯಯ ಒಮು, ಬಹುವಚನ ಪ್ರತ್ಯಯ ಅಬ (ಒಮುಕಜಿ-ಹೆಂಗಸು, ಅಬಕಜಿ-ಹೆಂಗಸರು, ಒಮುಲೆನ್ಜಿ-ಹುಡುಗ, ಅಬಲೆರನ್ಜಿ-ಹುಡುಗರು). ನಾಮಪದಗಳ ವರ್ಗಕ್ಕನುಗುಣವಾಗಿ ಈ ಪ್ರತ್ಯಯಗಳು ಬದಲಾಗುತ್ತವೆ. ಸ್ವಹೀಲೇ ಭಾಷೆಯಲ್ಲಿ ಮಾನವಸೂಚಿ ನಾಮಪದಗಳಿಗೆ ಸೇರುವ ಪ್ರತ್ಯಯಗಳೇ ಬೇರೆ, ಇತರ ನಾಮಪದಗಳಿಗೆ ಸೇರುವ ಪ್ರತ್ಯಯಗಳೇ ಬೇರೆ (ಉದಾಹರಣೆ: ಮ್ತೋತೊ - ಮಗು, ವತೋತೊ-ಮಕ್ಕಳು, ಮ್ತಿ-ಮರ, ಮಿತಿ-ಮರಗಳು, ಕಿಕಪು-ಕುಕ್ಕೆ, ವಿಕವು-ಕುಕ್ಕೆಗಳು, ಉಬಒ-ಮಣೆ, ಮ್ಬಒ-ಮಣೆಗಳು, ಉಲಿಮಿ-ನಾಲಗೆ, ನ್ದಿಮಿ-ನಾಲಗೆಗಳು). ಕೆಲವೊಮ್ಮೆ ಏಕವಚನ ಸೂಚಕ ಪ್ರತ್ಯಯವಿಲ್ಲದೆ, ಬಹುವಚನ ರೂಪದಲ್ಲಿ ಮಾತ್ರ ಪ್ರತ್ಯಯ ಕಂಡುಬರುತ್ತದೆ (ಬೊಗ-ಕುಂಬಳಕಾಯಿ, ಮಬೊಗ-ಕುಂಬಳಕಾಯಿಗಳು). ಬಾಂಟೂ ಎಂಬ ಪದವೇ ಬಹುವಚನರೂಪ. ಇದರಲ್ಲಿ ಬ-ಎನ್ನುವುದು ಪ್ರತ್ಯಯ-ನ್ಟು ಎನ್ನುವುದು ಪ್ರಕೃತಿ, ವ್ಯಕ್ತಿ ಎಂದರ್ಥ. ಏಕವಚನದಲ್ಲಿ ಮು-ಎಂಬ ಪ್ರತ್ಯಯ ಸೇರುತ್ತದೆ.

ಬಾಂಟೂ ಪರಿವಾರದ ಹೆಚ್ಚು ಭಾಷೆಗಳಲ್ಲಿ ವಿವೃತ ಎ.ಒ ಧ್ವನಿಗಳೂ ಹಾಗೂ ಆ ಧ್ವನಿಯೂ ಕಂಡುಬರುತ್ತವೆ. ಅನುನಾಸಿಕ ಅಥವಾ ಪಾಶ್ರ್ವಿಕ ವರ್ಣಗಳಿಂದ ಕೂಡಿದ ವ್ಯಂಜನ ಗುಚ್ಛಗಳನ್ನು ಬಿಟ್ಟರೆ ಇತರ ಸಂಯುಕ್ತ ವ್ಯಂಜನಗಳು ಕಡಿಮೆ. ಸ್ವರಾಂತ ಮತ್ತು ಅನುನಾಸಿಕಾಂತ ಅಕ್ಷರಗಳು ಹೆಚ್ಚು. ಸ್ವರಗಳಂತೆ ಬಳಕೆಯಾಗುವ ಅನುನಾಸಿಕಗಳು ಸರ್ವೇ ಸಾಮಾನ್ಯ. ಖೊಯಿಸನ್ ಭಾಷೆಗಳಿಂದ ಎರವಲಾಗಿದೆ ಎನ್ನಬಹುದಾದ ಅಂತರ್‍ಸ್ಫೋಟಾತ್ಮಕ ದ್ವಿಸ್ಪರ್ಶಿ ಧ್ವನಿಗಳು ಕೆಲವು ಭಾಷೆಗಳಲ್ಲಿವೆ. ಮೂಲ ಬಾಂಟುವಿನಲ್ಲಿ ಪ, ತ, ಕ, ಬ, ಲ, ಗ, ಮ, ನ, ಙ, ವ, ಯ ಹಾಗೂ ತಾಲವ್ಯ ಉಚ್ಚಾರದಿಂದ ಕೂಡಿದ ತ, ಲ, ಕ, ಮತ್ತು ಗ ಎಂಬ ವ್ಯಂಜನಗಳೂ ಆ, ಇ, (ವಿವೃತ ಮತ್ತು ಸಂವೃತ) ಉ (ವಿವೃತ ಮತ್ತು ಸಂವೃತ), ಎ (ವಿವೃತ), ಒ (ವಿವೃತ) ಎಂಬ ಸ್ವರಗಳೂ ಇತ್ತೆಂದು ಕಾರ್ಲ್‍ಮೆಯಿನ್ ಹಾಫ್ ಹೇಳಿದ್ದಾರೆ. ಸ್ವಹೀಲೇ ಭಾಷೆಯನ್ನುಳಿದ ಇತರ ಬಾಂಟೂ ಭಾಷೆಗಳಲ್ಲಿ ಸ್ವರಾಘಾತದ ಬಳಕೆಯಿದೆ.

ಈ ಭಾಷೆಗಳಲ್ಲಿಯ ಮುಖ್ಯ ಪದಾಂಶಗಳೆಂದರೆ ನಾಮಪದ, ಸರ್ವನಾಮ, ಆಖ್ಯಾತ ಮತ್ತು ವಿಶೇಷಣ, ಇವಲ್ಲದೇ ಹಲವು ಬಗೆಯ ನಿಪಾತಗಳು ಬಳಕೆಯಲ್ಲಿವೆ. ನಾಮಪದದಲ್ಲಿ ಸಾಮಾನ್ಯವಾಗಿ ಒಂದು ಪ್ರಾತಿಪದಿಕವೂ ಒಂದು ಪೂರ್ವಪ್ರತ್ಯಯವೂ ಇರುತ್ತವೆ. ವಚನಕ್ಕೆ ಅನುಗುಣವಾಗಿ ಈ ಪ್ರತ್ಯಯಗಳು ಬದಲಾಗುತ್ತವೆ. ಕೆಲವು ನಾಮಪದಗಳು ಏಕವಚನದಲ್ಲೂ ಕೆಲವು ಬಹುವಚನದಲ್ಲೂ ಕಂಡುಬರುತ್ತವೆ. ಕೆಲವು ಪ್ರಾತಿಪದಿಕಗಳಿಗೆ ಪೂರ್ವ ಮತ್ತು ಪರ ಪ್ರತ್ಯಯಗಳೆರಡೂ ಸೇರುತ್ತವೆ. ಒಂದೇ ಪ್ರಾತಿಪದಿಕದಿಂದ ನಾಮಪದದ ರೂಪ, ಕ್ರಿಯಾಪದದ ರೂಪ, ಎರಡು ಘಟಿತವಾಗುತ್ತವೆ. ಪ್ರಾತಿಪದಿಕದೊಡನೆ ಸೇರುವ ಪೂರ್ವ ಪ್ರತ್ಯಯಗಳನ್ನು ಆಧರಿಸಿ ನಾಮಪದಗಳನ್ನು 14 ಗುಂಪುಗಳಲ್ಲಿ ವಿಭಾಗಿಸಬಹುದು. ವ್ಯಕ್ತಿವಾಚಕಗಳೆಲ್ಲ ಮೊದಲನೆಯ ವರ್ಗದಲ್ಲಿ ಬರುತ್ತವೆ. ಈ ಪ್ರತ್ಯಯಗಳು ಕೆಲವೊಮ್ಮೆ ವಾಕ್ಯದಲ್ಲಿ ಪದಗಳ ನಡುವೆ ಅನ್ವಯವನ್ನು ಸೂಚಿಸುವುದರಿಂದ ವಾಕ್ಯದಲ್ಲಿ ಅನುಪ್ರಾಸವನ್ನು ಕಾಣಬಹುದು. (ಉದಾಹರಣೆ: ಸ್ವಹೀಲೇ ಭಾಷೆಯಲ್ಲಿ ಕಿ ದೊಲೆ ಕಿ ರೇಫು ಕಿನ ಒ ಈಶ ಉದ್ದನೆಯ ಬೆರಳು ತೋರಿಸುತ್ತದೆ. ವಿದೋಲೆ ವಿರೇಫು ವಿನೊ ಈಶ ಉದ್ದನೆಯ ಬೆರಳುಗಳು ತೋರಿಸುತ್ತವೆ). ನಾಮಪದಗಳಂತೆಯೇ ಕ್ರಿಯಾಪದಗಳೂ ಪೂರ್ವಪ್ರತ್ಯಯದಿಂದ ಕೂಡಿರುತ್ತವೆ. ಪೂರ್ವ ಪ್ರತ್ಯಯ ಸೇರದೆ ಕ್ರಿಯಾರೂಪಗಳೇ ಪೂರ್ಣವಾಗುವುದಿಲ್ಲ. ಇದರಿಂದಾಗಿ ಬೇರೆ ಭಾಷೆಗಳಲ್ಲಿ 4-5 ಪದಗಳಿಂದ ಕೂಡಿರುವ ಒಂದು ವಾಕ್ಯದಲ್ಲಿ ಹೇಳುವುದನ್ನು ಒಂದೇ ಪದದಲ್ಲಿ ಹೇಳಬಹುದು (ಉದಾಹರಣೆ: ಸ್ವಹೀಲೇಯಲ್ಲಿ ಆತ-ನಿ-ಪೆಂದ ಅವನು ನನ್ನನ್ನು ಇಷ್ಟ ಪಡುತ್ತಾನೆ. ಆತ-ಕು-ಪೆಂದ ಅವನು ನಿನ್ನನ್ನು ಇಷ್ಟಪಡುತ್ತಾನೆ. ಆತ-ತು-ಪೆಂದ ಅವನು ನಮ್ಮನ್ನು ಇಷ್ಟಪಡುತ್ತಾನೆ. ಆತ-ವ-ಪೆಂದ ಅವನು ಅವರನ್ನು ಇಷ್ಟಪಡುತ್ತಾನೆ.) ವಿದ್ಯರ್ಥಕರೂಪಗಳನ್ನು ಬಿಟ್ಟರೆ ಧಾತುವಿಗೆ ಒಂದು ಪೂರ್ವಪ್ರತ್ಯಯ, ಒಂದು ಅಥವಾ ಹೆಚ್ಚಿನ ಪರಪ್ರತ್ಯಯಗಳನ್ನು ಸೇರಿಸುವುದರಿಂದ ಬಾಂಟೂ ಭಾಷೆಗಳಲ್ಲಿ ಕ್ರಿಯಾರೂಪಗಳು ಸಿದ್ಧವಾಗುತ್ತವೆ. ಪೂರ್ವ ಪ್ರತ್ಯಯದಿಂದ ಕೂಡಿದ ಕ್ರಿಯಾರೂಪ ಸಾಮಾನ್ಯವಾಗಿ ಪುರುಷ ಮತ್ತು ವಚನಗಳನ್ನೂ ಸಪ್ತಮಿ ವರ್ಗಕ್ಕೆ ಸೇರಿದ್ದಲ್ಲಿ ಅಧಿಕರಣ ಸಂಬಂಧವನ್ನು ಸೂಚಿಸುತ್ತವೆ. ಪರಪ್ರತ್ಯಯಗಳು ಕಾಲ, ನಿಷೇಧ, ವಾಚ್ಯ ಇತ್ಯಾದಿಗಳನ್ನು ಸೂಚಿಸುತ್ತವೆ. ಕ್ರಿಯಾರೂಪವು ಸಾಮಾನ್ಯವಾಗಿ ಅಕಾರಾಂತ ಪ್ರತ್ಯಯದಿಂದ ಕೊನೆಗೊಳ್ಳುತ್ತದೆ. ಕರ್ಮಪದವನ್ನು ಉಪಯೋಗಿಸದಿದ್ದಾಗ ಪ್ರಾತಿಪದಿಕಕ್ಕೆ- ಆ ಪ್ರತ್ಯಯ ಸೇರಿಸುವುದರಿಂದ ವಿದ್ಯರ್ಥಕ ಏಕವಚನ ರೂಪವಾಗುತ್ತದೆ. ಕೆಲವು ನಿಷೇದಾರ್ಥಕ ಕ್ರಿಯಾರೂಪಗಳು ಸಂವೃತ-ಇ ಎಂಬ ಪ್ರತ್ಯಯವನ್ನು ಸೇರುವುದರಿಂದಲೂ ವಿದ್ಯರ್ಥಕ ಕ್ರಿಯಾರೂಪಗಳು ವಿವೃತ-ಇ ಎಂಬ ಪ್ರಯತ್ನವನ್ನು ಸೇರುವುದರಿಂದಲೂ ಪರೊಕ್ಷ ಭೂತಕಾಲದ ರೂಪಗಳು ಎ ಎಂಬ ಪ್ರತ್ಯಯವನ್ನು ಸೇರುವುದರಿಂದಲೂ, ಸಿದ್ಧವಾಗಿರುತ್ತವೆ.  ಕ್ವೆನ ಭಾಷೆಯಲ್ಲಿಯ ರೂಪಗಳನ್ನು ಗಮನಿಸಿದರೆ ಕ್ರಿಯಾರೂಪಗಳಲ್ಲಿ ಪ್ರತ್ಯಯಗಳ ಪ್ರಯೋಜನ ಮತ್ತು ಅವು ಸೂಚಿರುವ ಅರ್ಥವೇನೆಂಬುದು ವ್ಯಕ್ತವಾಗುತ್ತದೆ.  ಖು-ರುತ್-ಆ (ಕಲಿಸು) ಖು-ರುತ್-ಆನ-ಅ (ಪರಸ್ಪರ ಕಲಿಸು). ಖು-ರುತ್-ಇಸ್-ಅ (ಕಲಿಸುವಂತೆ ಮಾಡು) ಖು-ರುತ್-ಆನ-ಅ (ಪರಸ್ಪರ ಕಲಿಸು). ಖು-ರುತ್-ಇವ್-ಅ (ಕಲಿಸಲ್ಪಡು), ಖು-ರುತ್-ಎಖ್-ಅ (ಕಲಿಸಲು ಯೋಗ್ಯವಾದ್ದು), ಮು-ರುತ್-ಇ (ಉಪಾಧ್ಯಾಯ) ಮು-ರುತ್-ಇವ್-ಇ (ಡ್ರಿಲ್ ಉಪಾಧ್ಯಾಯ) ಮು-ರುತ್-ಇವ್-ಅ (ವಿದ್ಯಾರ್ಥಿ) ಮು-ರುತ್-ವ್-ಅನ (ಶಿಷ್ಯ) ಹೀಗೆ ಪ್ರತ್ಯಯಗಳನ್ನು ಸೇರಿಸಿ ದೀರ್ಘಪದಗಳನ್ನು ರಚಿಸಬಹುದು.		 (ಎಚ್.ಎಸ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ